ಕುಬ್ಲೈಖಾನ್

1215-1294. ಮಂಗೋಲ್ ರಾಜ್ಯಸ್ಧಾಪಕ ಮತ್ತು ಚಂಘಿಸ್‍ಖಾನನ ವಂಶದವರಲ್ಲಿ ಅತ್ಯಂತ ಪ್ರಸಿದ್ಧ. ಸಮರ್ಥನೂ ಪರಾಕ್ರಮಿಯೂ ಅದ ಈತ 1252-56ರಲ್ಲಿ ಪೆeóïವಾನ್ ಪ್ರಾಂತ್ಯ ಮತ್ತು ಥೈಲೆಂಡುಗಳನ್ನು ಗೆದ್ದು ಮಂಗೋಲರ ಅಧಿಕಾರವನ್ನು ಅವರು ಒಪ್ಪಿಕೊಳ್ಳುವಂತೆ ಮಾಡಿದ. 1259ರಲ್ಲಿ ಇವನ ಅಣ್ಣನೂ ಚಕ್ರವರ್ತಿಯೂ ಆದ ಮಂಗೂಖಾನ್ ಪಶ್ಚಿಮ ಚೀನದಲ್ಲಿ ಯುದ್ಧನಿರತನಾಗಿದ್ದಾಗ ಸತ್ತಾಗ ಇವನೇ ಚಕ್ರವರ್ತಿಯಾದ. ಇವನ ತಮ್ಮ ಅರಿಕ್ ಬೋಗೆ ಕಾರಕೋರಂ ಪ್ರಾಂತ್ಯದಲ್ಲಿ ತನ್ನ ಕೊನೆಗಾಲದ ವರೆಗೂ (1301) ಸ್ವತಂತ್ರನಾಗಿಯೇ ಇದ್ದ. ಕುಬ್ಲೈಖಾನ್ 1267ರಲ್ಲಿ ಸುಂಗ್ ಚಕ್ರವರ್ತಿಯ ವಿರುದ್ಧ ಯುದ್ಧ ಸಾರಿ 1276ರ ವೇಳೆಗೆ ಅಂತಿಮ ಜಯ ಗಳಿಸಿ ಇಡೀ ಚೀನದ ಪ್ರಭುವಾದ. ಕ್ರಮ ಕ್ರಮವಾಗಿ ಕೊರಿಯದಿಂದ ಅರೇಬಿಯದ ಮರಳ್ಗಾಡಿನ ವರೆಗೂ ಇವನು ತನ್ನ ಅಡಳಿತ ವಿಸ್ತರಿಸಿದ. ಬಲಾತ್ಕಾರದಿಂದ ಧನವನ್ನು ಸಂಗ್ರಹಿಸಿ ದುಂದುವೆಚ್ಚಮಾಡಿ ವೈಭವದಿಂದ ರಾಜ್ಯಭಾರ ಮಾಡಿದರೂ ವ್ಯಾಪಾರವನ್ನು ಊರ್ಜಿತಗೊಳಿಸಿದ.

 ಈತನಿಗೆ ಜ್ಞಾನಾರ್ಜನೆಯಲ್ಲಿ ವಿಶೇಷವಾದ ಅಸಕ್ತಿ ಇತ್ತು. ಚೀನದ ಸಾಹಿತ್ಯ ಸಂಸ್ಕೃತಿಗಳನ್ನು ಪ್ರೋತ್ಸಾಹಿಸಿದನ್ನಲ್ಲದೆ ಬೌದ್ಧಮತವನ್ನು ಪುರಸ್ಕರಿಸಿದ. ವಿದೇಶಗಳ ಪ್ರತಿಷ್ಠಿತ ಜನರೊಂದಿಗೆ ಸಂಪರ್ಕ ಬೆಳೆಸಿದುದರಿಂದ ಈತನ ಖ್ಯಾತಿ ಹೆಚ್ಚಿತು.

 ಚೀನದ ನೆರೆಯ ರಾಜ್ಯಗಳು ತನ್ನ ಅಧಿಕಾರವನ್ನೊಪ್ಪಬೇಕೆಂದು ಕೇಳಿ, ಅವರು ಒಪ್ಪದಿದ್ದಾಗ ಅವರ ಮೇಲೆ ಈತ ಯುದ್ಧ ಮಾಡಿದನಾದರೂ ಹೆಚ್ಚಿನ ಜಯಗಳಿಸಲಿಲ್ಲ. 1274-81ರಲ್ಲಿ ಎರಡು ಬಾರಿ ಜಪಾನಿನೊಡನೆ ಯುದ್ಧ ಮಾಡಿದ. ಅದು ವ್ಯರ್ಥವಾಯಿತು. 1283-87ರಲ್ಲಿ ಚಂಪಾ ರಾಜ್ಯದ ಮೇಲಣ ಧಾಳಿಯಲ್ಲಿ ಜಯಲಭಿಸಲಿಲ್ಲ. 1277-1287ರ ನಡುವೆ ನಡೆಸಿದ ಬರ್ಮಿ ಯುದ್ಧಗಳಿಂದಲೂ ಹೆಚ್ಚಿನ ಫಲ ದೊರಕಲಿಲ್ಲ. ಕಂಬುಜ ರಾಜ್ಯ ಇವನ ಪ್ರಭುತ್ವವನ್ನು ಹೆಸರಿಗೆ ಮಾತ್ರ ಒಪ್ಪಿಕೊಂಡಿತು. 1293ರಲ್ಲಿ ಮಜಪಹಿತ್ ರಾಜ್ಯದ ಮೇಲಣ ಅಕ್ರಮಣ ವಿಫಲಗೊಂಡಿತು. ಈತ ದಕ್ಷಿಣಭಾರತಕ್ಕೆ ತನ್ನ ದೂತರನ್ನು ವ್ಯಾಪಾರ ಸಂಪರ್ಕ ಬೆಳೆಸುವ ಸಲುವಾಗಿ ಕಳುಹಿಸಿದ.

 ಕುಬ್ಲೈಖಾನ್ ಉತ್ತಮ ಅಡಳಿತಗಾರ. ತಾನು ಚೀನದ ನಿಜವಾದ ಚಕ್ರವರ್ತಿ ಎಂದು ಭಾವಿಸಿ ಅದರ ಏಳಿಗೆಗಾಗಿ ದುಡಿದ. ಪೀಕಿಂಗ್ ಚೀನದ ರಾಜಧಾನಿಯಾದ್ದು ಇವನ ಕಾಲದಲ್ಲಿ. ದಕ್ಷಿಣ ಮಂಗೋಲಿಯದ ಷಾಂಗ್-ಟು ಬೇಸಗೆ ರಾಜಧಾನಿಯಾಗಿತ್ತು. ಈತ ಅಡಳಿತವನ್ನು ವ್ಯವಸ್ಧೆಗೊಳಿಸಿ ಚೀನದ ಪರಂಪರಾಗತ ಸಂಪ್ರದಾಯಗಳನ್ನು ಮುಂದುವರಿಸಿದ. ಸಾಮಾಜಿಕ ವ್ಯವಸ್ಧೆಯ ಸುಧಾರಣೆಯೂ ಆಯಿತು. ಅದರಲ್ಲಿ ಮಂಗೋಲರಿಗೆ ಪ್ರಾಧಾನ್ಯ ದೊರಕುವಂತಾಯಿತು. ಆದರೆ ದಕ್ಷಿಣ ಚೀನದ ಜನರಿಗೆ ಹೆಚ್ಚಿನ ಪ್ರಮುಖ್ಯ ದೊರಕದಂತೆ ಮಾಡಲಾಯಿತು; ಕಾಗದದ ಹಣ ಚಲಾವಣೆಯಲ್ಲಿತ್ತು. ಈತನ ಕಾಲದಲ್ಲಿ ಮತಸಹಿಷ್ಣುತೆಯಿತ್ತು. ಚೀನದ ಸಾಹಿತ್ಯ ಸಂಸ್ಕøತಿಗಳಿಗೆ ಪ್ರೋತ್ಸಾಹ ದೊರಕಿತು. ಇವನ ಅಜ್ಞೆಯ ಮೇರೆಗೆ ಚೀನೀ ಗ್ರಂಥಗಳು ಮಂಗೋಲ್ ಭಾಷೆಗೆ ಅನುವಾದವಾದುವು. ಲಾಮಾ ಬೌದ್ಧಮತದಲ್ಲಿ ಈತ ಅಸಕ್ತಿ ತೋರಿ ಕೊನೆಗೆ ತಾನೂ ಅದಕ್ಕೆ ಮತಾಂತರ ಹೊಂದಿದ. ಟಿಬೆಟಿನ ಫಗ್ಸ್‍ಪಾ ಎಂಬ ಭಿಕ್ಷು ಆಗ ಬೌದ್ಧಮತ ಆಚಾರ್ಯನಾಗಿದ್ದ. ಆತ 1269ರಲ್ಲಿ ಮಂಗೋಲ್ ಭಾಷೆಗೆ ಹೊಸ ಲಿಪಿಯನ್ನು ಹೊಂದಿಸಿದ. ಆದರೆ ಈ ಲಿಪಿ ಜನಪ್ರಿಯವಾಗಲಿಲ್ಲ. ಉಯಿಘುರ್ ಲಿಪಿಯೇ ಮುಂದುವರಿಯಿತು. ಮಾರ್ಕೊಪೋಲೋನ ಬರಹಗಳಿಂದ ಇವನ ಆಸ್ಧಾನದ ವೈಭವ, ಆಡಳಿತಪದ್ಧತಿ, ಮತ್ತಿತರ ವಿಷಯಗಳ ಬಗ್ಗೆ ಅನೇಕ ಸಂಗತಿಗಳು ತಿಳಿದು ಬರುತ್ತವೆ.

 ಕುಬ್ಲೈಖಾನ್ ವಿಶ್ವದ ಇತಿಹಾಸದ ಪ್ರಧಾನ ವ್ಯಕ್ತಿಗಳಲ್ಲೊಬ್ಬನೆಂದು ಪರಿಗಣಿಸಬಹುದು. ಕ್ರೂರ ಅನಾಗರಿಕ ಅಲೆಮಾರಿ ಜನಾಂಗದಲ್ಲಿ ಹುಟ್ಟಿದರೂ ಸುಸಂಸ್ಕøತವಾದ ಬೃಹತ್ ರಾಷ್ಟ್ರವೊಂದನ್ನು ದೀರ್ಘಕಾಲ ದಕ್ಷತೆಯಿಂದ ಅಳಿದ ಕೀರ್ತಿ ಈತನಿಗೆ ಸಲ್ಲುತ್ತದೆ.           

 (ಪಿ.ಬಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ